ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಎಂಬಲ್ಲಿ ಶರಾವತಿ ಜಲವಿದ್ಯುದುತ್ಪಾದನಾ ಯೋಜನೆಗಾಗಿ ಶರಾವತಿ ನದಿಗೆ ಅಣೆಕಟ್ಟೆ ನಿರ್ಮಿಸಿರುವ ಒಂದು ಜಲಾಶಯ. ಈ ಜಲಾಶಯ ಸಾಗರಕ್ಕೆ ಪಶ್ಚಿಮದಲ್ಲಿ 32 ಕಿಮೀ ದೂರದಲ್ಲೂ ಬೀರೂರು-ತಾಳಗುಪ್ಪ ಮಾರ್ಗದ ಕೊನೆಯ ರೈಲು ನಿಲ್ದಾಣ ತಾಳಗುಪ್ಪದಿಂದ ಸು. 15 ಕಿಮೀ ದೂರದಲ್ಲೂ ಇದೆ. ಜೋಗ ಜಲಪಾತಕ್ಕೆ 5 ಕಿಮೀ ಮೇಲುಗಡೆ ಈ ಜಲಾಶಯವನ್ನು ನಿರ್ಮಿಸಿದ್ದು ಇದರಲ್ಲಿ ಹಿಂದೆ ಕಟ್ಟಲಾಗಿದ್ದ ಹಿರೇಭಾಸ್ಕರ್ ಜಲಾಶಯ ಮುಳುಗಿಹೋಗಿದ್ದು ಅದರ ಕಾರ್ಯವೂ ಈಗ ಈ ಜಲಾಶಯಕ್ಕೇ ಸೇರಿದೆ.

ಈ ಜಲಾಶಯದ ಜಲಾನಯನ ಪ್ರದೇಶದ ವಿಸ್ತೀರ್ಣ 1,992 ಚ. ಕಿಮೀ. ಲಿಂಗನಮಕ್ಕಿ ಜಲಾಶಯದ ಜಲಶೇಖರಣಾಸಾಮಥ್ರ್ಯ 4,368 ದಶಲಕ್ಷ ಘನ ಮೀ; ಅಂದರೆ ಕೃಷ್ಣರಾಜಸಾಗರದ ಸು.31/2 ಯಷ್ಟು, ಭದ್ರಾ ಜಲಾಶಯದ 2 ರಷ್ಟು, ತುಂಗಭದ್ರಾ ಜಲಾಶಯದ 11/4 ರಷ್ಟು. ಕಟ್ಟೆಯ ಒಟ್ಟು ಉದ್ದವಾದ 2,751 ಮೀನಲ್ಲಿ, ಕಟ್ಟೆಯ ಎಡಭಾಗದ 1,780 ಮೀ ಸುರ್ಕಿಗಾರೆಯಲ್ಲಿ ಕಟ್ಟಿದ ಕಲ್ಲುಕಟ್ಟಡ.  ಉಳಿದ ಭಾಗ ಮುಂದುಗಡೆಗೆ ಕಲ್ಲುಬಂಡೆಗಳನ್ನು ಪೇರಿಸಿರುವ ಮಣ್ಣಿನ ಏರಿ.ಈ ಅಣೆಕಟ್ಟಿಗೆ ಮುಳುಗಡೆಯಾದ ಭೂಮಿಯ ವಿಸ್ತಾರ 6,162.08 ಹೆಕ್ಟೇರ್. ಇಲ್ಲಿಯ ನೀರಿನ ಗರಿಷ್ಠ ಹರವು 326.34 ಚ.ಕಿಮೀ.  ಅದ್ಭುತ ಪ್ರಕೃತಿ ಸೌಂದರ್ಯ ಇಲ್ಲಿದೆ. ಕಟ್ಟೆಯ ಅತ್ಯಂತ ಆಳವಾದ ತಳಪಾಯ ದಿಂದ ಕಟ್ಟೆಯ ಎತ್ತರ 61.7 ಮೀ. ಹೊಳೆಯಲ್ಲಿ ಬರುವ ಗರಿಷ್ಠ ಪ್ರವಾಹ ಸೆಕೆಂಡಿಗೆ 16,744 ಘಮೀ ಎಂದು ಅಂದಾಜು ಮಾಡಲಾಗಿದೆ. ಇದಕ್ಕೆ ಅನುಕೂಲವಾಗಿ ನದಿಯ ಭಾಗದಲ್ಲಿನ ಕಟ್ಟೆಯಲ್ಲಿ ಓಗಿ ಆಕಾರದ ಕೋಡಿಯನ್ನು ಬಿಡಲಾಗಿದೆ. ಇದರ ಮೇಲಿನ ಹರಿವನ್ನು ನಿಯಂತ್ರಿಸಲು 15.5 ಮೀ ಅಗಲ 7.44 ಮೀ ಎತ್ತರವಿರುವ 11 ಆರೀಯ ಶಿಖರೀ ಬಾಗಿಲುಗಳನ್ನು (ರೇಡಿಯಲ್ ಕ್ರಸ್ಟ್‍ಗೇಟ್ಸ್) ಅಳವಡಿಸಿದೆ. ಕಟ್ಟೆಯ ಎಡದಂಡೆಯಲ್ಲಿ ವಿದ್ಯುತ್ ನಾಲೆಗೆ ನೀರು ಬಿಡಲೆಂದು 2.48 ಮೀ 4.34 ಮೀ ಅಳತೆಯ 3 ತೂಬುಗಳನ್ನಿಟ್ಟಿದೆ. ಇವುಗಳ ಎಡಭಾಗದಲ್ಲಿ ಕಟ್ಟೆಯ ಕೆಳಗೆ, ವಿದ್ಯುತ್ ಕೇಂದ್ರಕ್ಕೆ ಅಗತ್ಯವಾಗುವಂಥ 4.96 ಮೀ ವ್ಯಾಸದ 2 ಕೊಳವೆಗಳನ್ನು ಜೋಡಿಸಿದೆ. ಆನೆಬೈಲಿನಲ್ಲಿ ನಿರ್ಮಿಸಿರುವ ವಿದ್ಯುದುತ್ಪಾದನಾ ಕೇಂದ್ರ ಆಗ್ನೇಯ ಏಷ್ಯದಲ್ಲೇ ದೊಡ್ಡದೆಂಬ ಹೆಗ್ಗಳಿಕೆ ಪಡೆದಿದೆ. ಇದಕ್ಕೆ ಮಹಾತ್ಮಗಾಂಧೀ ಜಲವಿದ್ಯುದಾಗರವೆಂಬ ಹೆಸರಿದೆ. ಗೇರುಸೊಪ್ಪೆ ಬಳಿ ವಿವಿಧ ಹಂತಗಳಲ್ಲಿ ಜಲಶಕ್ತಿಯನ್ನು ಬಳಸಿಕೊಳ್ಳುವ ವಿದ್ಯುದುತ್ಪಾದನಾ ಕೇಂದ್ರಗಳನ್ನು ನಿರ್ಮಿಸಲಾಗಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ